ಡೆಂಗೆ ಜ್ವರ -
	ವೈರಸ್ ಗುಂಪಿಗೆ ಸೇರಿದ ಒಂದು ಬಗೆ ವಿಷಾಣುವಿನ ಸೋಂಕಿನಿಂದ ಉಂಟಾಗುವ ಜ್ವರ, ಸ್ನಾಯು ಹಾಗೂ ಕೀಲುಗಳಲ್ಲಿ ಬಲು ನೋವು ಬಾಧಿಸುವುದು ಈ ಜ್ವರದ ಒಂದು ಪ್ರಮುಖ ಲಕ್ಷಣ. ರೋಗಿಯಿಂದ ಆರೋಗ್ಯ ವ್ಯಕ್ತಿಗೆ ಸೋಂಕು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಕಡಿತದಿಂದ ಅಂಟುತ್ತದೆ. ಕೆಲವು ಸ್ಥಳಗಳಲ್ಲಿ ಈಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆ ಸೋಂಕನ್ನು ಹರಡುವುದು ತಿಳಿದಿದೆ. ಸೋಂಕು ತಗುಲಿ 5-6 ದಿವಸಗಳಾದ ಬಳಿಕ ಇದ್ದಕ್ಕಿದ್ದಂತೆ ಅಸಾಧ್ಯ ತಲೆನೋವು, ಸ್ನಾಯು ಹಾಗೂ ಕೀಲುಗಳಲ್ಲಿ ಅತೀವ ಯಾತನೆ, ಬೆನ್ನುನೋವು ಇತ್ಯಾದಿ ಕಂಡುಬಂದು ಜ್ವರ ಪ್ರಾರಂಭವಾಗುತ್ತದೆ. ಇದು ಈ ರೋಗದ ಮೊದಲನೆಯ ಹಂತ. ಜ್ವರ ಹೊಮ್ಮಿದ 5-6 ದಿವಸಗಳ ಬಳಿಕ ಮುಂಡ, ಕುತ್ತಿಗೆ, ಕೈಕಾಲುಗಳಲ್ಲಿ (ಬೆರಳುಗೆಣ್ಣುಗಳ ಮೇಲೆ) ದಡಾರವನ್ನು ಹೋಲುವ ದದ್ದುಗಳು ಕಂಡುಬರುತ್ತವೆ. ಎರಡನೆಯ ಹಂತದಲ್ಲಿ ಜ್ವರ ಇಳಿಯುವುದೇ ಅಲ್ಲದೆ ದದ್ದುಗಳೂ ಕಣ್ಮರೆಯಾಗುವುವು. ಇದು ಒಂದೆರಡು ದಿವಸ. ತರುವಾಯ ಮೂರನೆಯ ಹಂತ, ಜ್ವರ ಪುನಃ ಏರಿ ಹಲವಾರು ಗಂಟೆಗಳ ಅನಂತರ ಇಳಿಯುತ್ತದೆ. ಬಂದ ಜ್ವರ ನಾಲ್ಕೈದು ದಿವಸ ಇದ್ದು ಇಳಿದು ಪುನಃ ಏರಿ ಶೀಘ್ರದಲ್ಲೆ ಇಳಿಯುವ ಈ ವಿಶಿಷ್ಟ ಲಕ್ಷಣವನ್ನು ಕುದುರೆ ಜೀನಿನ ಮಾದರಿ (ಸ್ಯಾಡಲ್ ಬ್ಯಾಕ್ ಟೈಪ್) ಎಂದು ವಿವರಿಸಲಾಗಿದೆ. ಜ್ವರದ ವೈಲಕ್ಷಣ್ಯ ಕೀಲು ಸ್ನಾಯುಗಳಲ್ಲಿ ಅತೀವ ನೋವು ಇವುಗಳೇ ಅಲ್ಲದೆ ರಕ್ತದಲ್ಲಿ ವರ್ಣರಹಿತ ಕಣಗಳ ಪೈಕಿ ನ್ಯೂಟ್ರೋಫಿಲ್‍ಗಳ ಸಂಖ್ಯೆ ಕಡಿಮೆ, ಲಿಂಫೋಸೈಟುಗಳ ಸಂಖ್ಯೆ ಹೆಚ್ಚಾಗುವುದರಿಂದಲೂ ಡೆಂಗೆ ಜ್ವರವನ್ನು ಗುರುತಿಸಬಹುದು.

	ಜ್ವರ ಕಾಣಿಸಿಕೊಂಡ 8-10 ದಿವಸಗಳಲ್ಲಿ ರೋಗ ತಾನಾಗಿಯೇ ಗುಣವಾಗುತ್ತದೆ. ಸೌಮ್ಯ ರೂಪದ ರೋಗ ಸರ್ವಥಾ ಮಾರಕವಲ್ಲ. ಒಂದು ಸಲ ಡೆಂಗಿ ಜ್ವರ ಬಂದ ವ್ಯಕ್ತಿ ಪುನಃ ಜೀವಮಾನ ಪರ್ಯಂತ ಡೆಂಗಿ ಜ್ವರಕ್ಕೆ ಸಾಮಾನ್ಯವಾಗಿ ತುತ್ತಾಗುವುದಿಲ್ಲ. ಈ ಕಾರಣಗಳಿಗಾಗಿ ಡೆಂಗಿ ಜ್ವರ ಚಿಕಿತ್ಸೆಗೆ ತೀವ್ರ ಲಕ್ಷ್ಯ ಕೊಡದೇ ಇರುವುದಾಗಿದೆ. ಅಲ್ಲದೆ ರೋಗಕಾರಕಗಳಾದ ವೈರಸುಗಳ ಮೇಲೆ ಗಣನೀಯ ಪರಿಣಾಮ ಹೊಂದಿರುವ ಔಷಧಗಳು ಸದ್ಯಕ್ಕೆ ಇಲ್ಲ. ಕೀಲು ಸ್ನಾಯುಗಳ ಯಾತನೆ ತಲೆನೋವುಗಳಿಗೆ ಆಸ್ಪಿರಿನ್ ಇತ್ಯಾದಿ ವೇದನಶಾಮಕಗಳನ್ನು ಕೊಡುತ್ತಾರೆ. ವ್ಯಕ್ತಿಗೆ ಸೋಂಕು ಅಂಟದಂತೆ ಮಾಡಲು ತಕ್ಕ ನಿರೋಧಕ ಮಾರ್ಗ ಇಲ್ಲ.

	ರೋಗವು ಡೆಂಗಿ ರಕ್ತೋದ್ರೇಕ ಜ್ವರ ಅಥವಾ ಡೆಂಗಿ ಆಘಾತ ಲಕ್ಷಣಕೂಟದ ರೂಪದಲ್ಲಿ ಮಕ್ಕಳಲ್ಲಿ ತೋರಿಬರಬಹುದು. ಅದು ಉಗ್ರರೂಪ ತಾಳಿದ್ದಾಗ ಜ್ವರ, ರಕ್ತಒತ್ತಡದ ಕುಸಿತ ಮತ್ತು ರಕ್ತ ಪರಿಚಲನೆ ಕುಸಿತ ತೋರಿಬರುತ್ತವೆ. ಲೋಮನಾಳಗಳು ರಕ್ತವನ್ನು ಹೊರಸೂಸಿ ರಕ್ತೋದ್ರೇಕಕ್ಕೆ ಎಡೆಮಾಡಿಕೊಡುತ್ತವೆ. ಆಗ ದ್ರವ ಇಲ್ಲವೆ ರಕ್ತಪೂರಣ ಮಾಡಬೇಕಾಗುವುದು.

	ರೋಗ ಪ್ರಸಾರವನ್ನು ತಡೆಗಟ್ಟಲು ಪ್ರಯತ್ನಿಸುವುದು ಒಳ್ಳೆಯದು. ಇದಕ್ಕಾಗಿ ಸೊಳ್ಳೆ ಹಾಗೂ ಸೊಳ್ಳೆಮರಿಗಳ ನಿರ್ಮೂಲನ ಕ್ರಮಗಳನ್ನು ಕೈಗೊಳ್ಳಬೇಕು. ಈಡಿಸ್ ಸೊಳ್ಳೆಗಳು ಮನೆ ಒಳಗೇ ತಂಗಿ ವೃದ್ಧಿಸುವ ಜಾತಿ. ಆದ್ದರಿಂದ ಮನೆಯಲ್ಲಿ ಕತ್ತಲೆ ಸಂದುಗಳಿಲ್ಲದಂತೆ ನೋಡಿಕೊಳ್ಳುವುದು, ಹಳೇಪಾತ್ರೆ, ಮಡಿಕೆ, ಕರಟ, ಡಬ್ಬ, ಮನೆ ಒಳಗಿನ ಹಳ್ಳಕೊಳ್ಳಗಳು ಇಲ್ಲೆಲ್ಲ ನೀರು ನಿಂತು ಸೊಳ್ಳೆ ವೃದ್ಧಿಗೆ ಅವಕಾಶವಾಗದಂತೆ ನೋಡಿಕೊಳ್ಳುವುದು, ಈ ಸ್ಥಳಗಳಲ್ಲೆಲ್ಲ ನಿರೋಧಕ ಔಷಧಗಳನ್ನು ಸಿಂಪಡಿಸುವುದು ಇವು ಇಂಥ ಕೆಲವು ಕ್ರಮಗಳು. ರೋಗಿಗಳಿಂದ ಇತರರಿಗೆ ರೋಗ ಪ್ರಸಾರವಾಗುವುದು ಜ್ವರ ಹೊಮ್ಮಿದ ಮೂರು ನಾಲ್ಕು ದಿವಸಗಳ ಪರ್ಯಂತ. ಆದ್ದರಿಂದ ಆ ಕಾಲದಲ್ಲಾದರೂ ಸೊಳ್ಳೆಪ್ರವೇಶವಿಲ್ಲದಂತೆ ಏರ್ಪಾಡು ಮಾಡಿರುವ ಕೋಣೆಯಲ್ಲಿ ರೋಗಿಯನ್ನಿಟ್ಟು ಶುಶ್ರೂಷೆ ಮಾಡಬೇಕು. ಈ ಜಾತಿಯ ಸೊಳ್ಳೆಗಳು ಹೆಚ್ಚಾಗಿ ಬೆಳಗಿನ ಹೊತ್ತೇ ಕಡಿಯುವುದರಿಂದ ಅವನ್ನು ದೂರೀಕರಿಸಲು ತಕ್ಕ ಔಷಧಗಳನ್ನು (ರಿಪೆಲ್ಲೆಂಟ್ಸ್) ಮುಖ ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು.
(ಕೆ.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ